ಪೌರಾಣಿಕ ಹಿನ್ನಲೆ ಹೇಳುವಂತೆ ದಕ್ಷಿಣದಲ್ಲಿ ವಿಂದ್ಯಾರಾಕ್ಷಸನೆಂಬ ರಾಕ್ಷಸನ ಉಪಟಳ ತಡೆಯಲಾರದೆ ದೇವತೆಗಳು ಅಗಸ್ತ್ಯ ಮುನಿಯನ್ನು ದಕ್ಷಿಣ ಪ್ರಾಂತ್ಯಕ್ಕೆ ಬರುವಂತೆ ಪ್ರಾರ್ಥಿಸಿದರು. ಅಂತೆಯೇ ಅಗಸ್ತ್ಯ ಮಹರ್ಷಿ ದಕ್ಷಿಣದೆಡೆಗೆ ಬಂದು ವಿಂದ್ಯಾರಾಕ್ಷಸನ ತೊಂದರೆಯನ್ನು ನಿವಾರಿಸಿದರು. ಆ ಬಳಿಕ ಹಲವು ಕಾಲ ಅಗಸ್ತ್ಯ ಮಹರ್ಷಿಗಳು ಭಾಗಮಂಡಲದ ತಪ್ಪಲು ಪ್ರದೇಶದಲ್ಲಿ ವಾಸಿಸಿ ಬರುತ್ತಿರುವ ಸಂದರ್ಭದಲ್ಲಿ ವನಾಸುರನೆಂಬ ರಾಕ್ಷಸ ಬ್ರಹ್ಮನ ವರಬಲದಿಂದ ಬೀಗಿ ದೇವತೆಗಳನ್ನು ಸೋಲಿಸಿದ್ದಲ್ಲದೇ ತನ್ನ ಮಾಯಾಜಾಲದಿಂದ ಕೊಳ ಸರೋವರಗಳನ್ನು ಸೃಷ್ಠಿಸಿ ಋಷಿಮುನಿಗಳನ್ನು ಅವುಗಳಲ್ಲಿ ಸ್ನಾನ ಮಾಡುವಂತೆ ಪ್ರೇರೇಪಿಸಿ, ಪೀಡಿಸಿ ತನ್ಮೂಲಕ ನಾನಾ ರೋಗಗಳನ್ನು ಬರುವಂತೆ ಮಾಡಿ, ಅವರಿಗೆ ನಾನಾ ರೀತಿಯ ಕಷ್ಟಗಳನ್ನು ಕೊಟ್ಟಾಗ ಸಂಕಷ್ಟಕ್ಕೊಳಗಾದ ದೇವ-ದೇವತೆಗಳು ಮತ್ತು ಋಷಿಗಳು ಅಗಸ್ತ್ಯ ಮಹರ್ಷಿಗಳ ಮೊರೆ ಹೋದರು. ಈ ವನಾಂತರದ ಮಧ್ಯೆ ಶ್ರೀ ಮಹಾದುರ್ಗಾ ಹವನವನ್ನು ಅಗಸ್ತ್ಯ ಮಹರ್ಷಿಗಳು ನೆರವೇರಿಸದಾಗ, ಜಗನ್ಮಾತೆಯು ಪ್ರಕಟಳಾದಳೆಂದೂ, ತಮ್ಮ ಕಷ್ಟವನ್ನು ನಿವೇದಿಸಿದಾಗ ಅಭಯಪ್ರದಳಾದ ಆ ತಾಯಿಯು ವನದುರ್ಗಾ ದೇವಿಯಾಗಿ ವನಾಸುರನನ್ನು ಸಂಹರಿಸಿ, ರೋಗರುಜಿನಗಳನ್ನೆಲ್ಲ ದೂರಮಾಡಿದಳೆಂದೂ ಪ್ರತೀತಿ. ಹೀಗೆ ವನದುರ್ಗೆಯಾಗಿ ರಾಕ್ಷಸರನ್ನು ಚೆಂಡಾಡಿ ನೆಲೆನಿಂತ ಕ್ಷೇತ್ರವೇ ದೇವಿಯ ಆಡುಂಬೊಲವಾಗಿ, ದೇಂತಡ್ಕವಾಯಿತೆಂದು ತಿಳಿದುಬರುತ್ತದೆ.
ಕೆದಿಲ ಗ್ರಾಮದ ಹಿಂದೆ ನಂದಾವರ ಸೀಮೆಗೆ ಒಳಪಟ್ಟಿದ್ದು, ಇಕ್ಕೇರಿಯ ಅರಸು ವೀರಭದ್ರ ನಾಯಕ ಹಾಗೂ ತುಳುನಾಡನ್ನು ಆಳುತ್ತಿದ್ದ ಕೆಳದಿಯ ೨ನೇ ಶಂಕರಿ ದೇವಿಯರೊಳಗೆ ಆದ ಕರಾರಿನಂತೆ ಕೆದಿಲ ಹಾಗೂ ಇನ್ನಿತರ ಕೆಲವು ಪ್ರದೇಶಗಳು ಉಪ್ಪಿನಂಗಡಿಗೆ ಮಾಗಣೆಗೆ ಸೇರಿ, ಮುಂದೆ ಉಪ್ಪಿನಂಗಡಿ ತಾಲೂಕಿಗೊಳಪಟ್ಟೂ, ಈಗ ಬಂಟ್ವಾಳ ತಾಲೂಕಿಗೆ ಸೇರಿದ್ದರೂ, ಹಿಂದೆ ಪುತ್ತೂರು ಸೀಮೆಯ ಮದಗದ ಕಿಲ್ಲೆ ಹಗಡೆಯ ವಂಶದ ಪಾಳೇಗಾರಿಕೆ ಹಾಗೂ ಆಡಳಿತಕ್ಕೆ ಒಳಪಟ್ಟು ಪುತ್ತೂರು ಸೀಮಾ ವ್ಯಾಪ್ತಿಗೆ ಬರುವ ಕ್ಷೇತ್ರ, ಈ ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನ.
ಸಿದ್ಧ ಸಂನ್ಯಾಸಿಯೋರ್ವರು ಪವಿತ್ರ ಕ್ಷೇತ್ರಗಳನ್ನು ಸಂದರ್ಶಿಸುತ್ತಾ, ದೇಂತಡ್ಕಕ್ಕೆ ಬಂದು ವಿಶ್ರಮಿಸಿದ ಸಂದರ್ಭದಲ್ಲಿ ಶ್ರೀ ದೇವಿಯು ಕನಸಿನಲ್ಲಿ ಕಾಣಿಸಿಕೊಂಡು, ಈ ಪರಿಸರದ ಮಹಿಮೆಯನ್ನು ತಿಳಿಸಿ, ತಾನು ನೆಲೆನಿಂತಿರುವ ಈ ಸ್ಥಳದಲ್ಲಿ ನನ್ನನ್ನು ಆರಾಧಿಸುತ್ತಾ, ಜನರ ಕಷ್ಟಗಳನ್ನು ಪರಿಹರಿಸುತ್ತಾ ಬರಬೇಕೆಂದು ಆಜ್ಞಾಪಿಸಿದಳು. ಅಂತೆಯೇ ಸಿಧ್ದ ಸಂನ್ಯಾಸಿಗಳು ದೇಂತಡ್ಕದಲ್ಲಿ ಶ್ರೀ ದೇವಿಯನ್ನು ಆರಾಧಿಸುತ್ತಾ ಬರುವ ಸಂದರ್ಭದಲ್ಲಿ ತುಳುನಾಡು ಕೆಳದಿ ಸಂಸ್ಥಾನಕ್ಕೆ ಒಳಪಟ್ಟು, ತುಳುನಾಡನ್ನು ಆಳುತ್ತಿದ್ದ ೨ನೇ ವೀರ ಬಂಗರಸನು ತನಗೆ ಸಂತಾನಭಾಗ್ಯವಿಲ್ಲದೇ ಕೊರಗಿ, ಸಿದ್ಧ ಸಂನ್ಯಾಸಿಗಳ ವಿಷಯ ಅರಿತು, ಅವರನ್ನು ಭೇಟಿಮಾಡಿ ತನ್ನ ಅಳಲನ್ನು ತೋಡಿಕೊಂಡನು. ಆಗ ಸಿದ್ದರು ಶ್ರೀ ವನದುರ್ಗಾ ದೇವಿಗೆ ದೇವಸ್ಥಾನ ನಿರ್ಮಿಸಿಕೊಡುತ್ತೇನೆಂದು ಪ್ರಾರ್ಥಿಸಿದಲ್ಲಿ ನಿನ್ನ ಇಷ್ಟಾರ್ಥ ಪೂರೈಸುವುದಾಗಿ ಹೇಳಿದರು. ಅಂತೆಯೇ ಬಂಗರಸನು ಪ್ರಾರ್ಥನೆ ಸಲ್ಲಿಸಿ, ಅವನಿಗೆ ಸಂತಾನವಾದರೂ ಅವನು ಮಾತಿಗೆ ತಪ್ಪಿದಾಗ, ಮಗು ಅನಾರೋಗ್ಯಪೀಡಿತವಾಯಿತೆಂದೂ, ಕೂಡಲೇ ಅರಸನು ದೇವಸ್ಥಾನ ನಿರ್ಮಾಣಕಾರ್ಯವನ್ನು ಕೈಗೆತ್ತಿಕೊಂಡು ತನ್ನ ಮಗುವಿಗೆ ಬಂದ ಆಪತ್ತನ್ನು ದೂರಮಾಡಿಕೊಂಡನೆಂದೂ ತಿಳಿದುಬರುತ್ತದೆ. ಅನಂತರದ ದಿನಗಳಲ್ಲಿ ಶ್ರೀ ದೇವಿಗೆ, ಜಾತ್ರೋತ್ಸವವೇ ಮುಂತಾದ ಉತ್ಸವಗಳೂ, ಪೂಜೆ ಪುರಸ್ಕಾರಗಳೂ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿತ್ತೆಂದೂ ಇತಿಹಾಸ ಹೇಳುತ್ತದೆ. ಉಪ್ಪಿನಂಗಡಿ ಬಂಡಾಡಿಯ ಬಲ್ಲಾಳರಾಯ ನಂದಾವರಕ್ಕೆ ದಂಡೆತ್ತಿ ಹೋಗುವ ಸಂದರ್ಭದಲ್ಲಿ ದೇಂತಡ್ಕದ ಸಂಪತ್ತನು ಕಂಡು, ದೋಚಲು ಪ್ರಯತ್ನಿಸಿ, ತಾನೇ ನಾಶವಾದನೆಂದೂ, ನಂತರದ ದಿನಗಳಲ್ಲಿ ತುಳುನಾಡ ಬಂಗರಸ ವೀರನರಸಿಂಗನು ದೇವಸ್ಥಾನದ ಆಡಳಿತವನ್ನು ಪರಿಸರದ ಬ್ರಾಹ್ಮಣ ಕುಟುಂಬಕ್ಕೆ ವಹಿಸಿ, ಕೆಲವು ಭೂಮಿಯನ್ನು ಉಂಬಳಿಯಾಗಿ ನೀಡಿದನೆಂದೂ ತಿಳಿದುಬರುತ್ತದೆ.
ಕೊಡಗಿನ ೩ನೇ ವೀರೆಂದ್ರನೆನ್ನುವ ರಾಜ ಯುದ್ಧದಲ್ಲಿ ತನ್ನ ರಾಜ್ಯವನ್ನು ಕಳೆದುಕೊಂಡು, ತಲೆಮರೆಸಿ, ದೇಂತಡ್ಕಕ್ಕೆ ಬಂದು ಪ್ರಾರ್ಥಿಸಿ. ದೇವಿಯ ಅನುಗ್ರಹದೊಂದಿಗೆ ರಾಜ್ಯವನ್ನು ವಶಪಡಿಸಿಕೊಂಡ ಬಗ್ಗೆಯೂ ಇತಿಹಾಸದಲ್ಲಿ ಉಲ್ಲೇಖ ಕಂಡುಬರುತ್ತದೆ. ಮುಂದೆ ಮೈಸೂರಿನ ಮುಸಲ್ಮಾನ ದೊರೆಗಳ ಆಕ್ರಮಣಕ್ಕೆ ತುತ್ತಾಗಿ ಈ ದೇವಸ್ಥಾನ ನಾಶವಾಗಿರಬಹುದೆಂದು ತಜ್ಞರು ಸ್ಥಳದಲ್ಲಿ ಸಿಕ್ಕಿದ ಕುರುಹು, ಪಳೆಯುಳಿಕೆಗಳನ್ನು ನೋಡಿ ಅಭಿಪ್ರಾಯಪಡುತ್ತಾರೆ.